ನಲ್ನುಡಿ
ಕುಂಬ್ರ ದುರ್ಗಾಪ್ರಸಾದ್ ರೈ
ಹಿರಿಯರಾದ ದಂಬೆಕ್ಕಾನ ಸದಾಶಿವ ರೈಗಳು “ಬಂಟ ಗುರಿಕ್ಕಾರನ ಮಾಹಿತಿ" ಕಿರುಹೊತ್ತಗೆಯನ್ನು ಮುದ್ರಿಸಿ ಹೊರತರಲು ಸಂಕಲ್ಪಿಸಿರುವುದು ಬಹಳ ಸಂತೋಷದ ವಿಚಾರವಾಗಿದೆ. ಜೀವನದ ಅನೇಕ ಮಜಲುಗಳನ್ನು ದಾಟಿ, ಅನೇಕ ವೈವಿಧ್ಯಮಯ ವ್ಯವಹಾರಗಳಿಗೆ ನಾಂದಿ ಹಾಡಿ ಇಂದು ಸಂತೃಪ್ತ ಜೀವನ ನಡೆಸುತ್ತಿರುವ ರೈಗಳು ಬಂಟ ಸಮಾಜದ ಮೇಲಿಟ್ಟಿರುವ ಕಳಕಳಿ ನಿಜವಾಗಿಯೂ ಮೆಚ್ಚುವಂತಹುದು. ಆ ಕಳಕಳಿ ಯಿಂದಾಗಿಯೇ ಈ ಪುಸ್ತಕವನ್ನು ಹೊರತರಲು ಶ್ರಮಪಟ್ಟಿದ್ದಾರೆ ಎಂದರೆ ತಪ್ಪಾಗಲಾರದು.
ಸಮಾಜದಲ್ಲಿ “ಬಂಟ ಜಾತಿಗೆ" ಒಂದು ವಿಶೇಷ ಸ್ಥಾನವಿದೆ. ಪ್ರೀತಿವಿಶ್ವಾಸದಿಂದ ಸಮಾಜದ ಎಲ್ಲಾ ವರ್ಗದವರನ್ನು ನಡೆಸಿ ಕೊಳ್ಳುವ ಬಂಟರು ಎಲ್ಲರ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ.
ಅಂತಹ ಬಂಟ ಸಮುದಾಯದವರಿಗೆ ಮದುವೆ ಅನ್ನುವ ಪವಿತ್ರ ಕಾರ್ಯ ಜೀವನದ ಬಹಳ ಪ್ರಮುಖ ಘಟ್ಟವಾಗಿದೆ. ಬಂಟರ ನಡುವೆ ಅನೇಕ ವೈವಿಧ್ಯಗಳಿಂದ ಕೂಡಿದ್ದರೂ ಸಾಮಾಜಿಕ ಬದಲಾವಣೆಗಳಿಂದಾಗಿ ಅನೇಕ ಮಾರ್ಪಾಡುಗಳನ್ನು ಕಂಡಿದೆ.
ಬಂಟರ ಮದುವೆ ಶಾಸವು ಗುರುವಿನ ಉಪದೇಶದಿಂದ ಕಲಿಸಲಟ್ಟ ವಿದ್ಯೆ ಅಲ್ಲದೆ ಇರುವುದರಿಂದ, ಬಂಟ ಗುರಿಕ್ಕಾರರು ತಮ್ಮ ಹಿರಿಯರಿಂದ ಕೇಳಿದ್ದನ್ನು ಮತ್ತು ತಮ್ಮ ನಂಬಿಕೆಯ ತಳಹದಿಯಲ್ಲಿ ತಮ್ಮ ಇತಿಮಿತಿಯಲ್ಲಿ ಮದುವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಬಂಟರ ಮದುವೆ ಶಾಸ್ತ್ರಕ್ಕೆ ಯಾವುದೇ ಲಿಖಿತ ವ್ಯಾಖ್ಯಾನಗಳು ಲಭ್ಯವಿಲ್ಲ. ಆದುದರಿಂದ ಅನೇಕ ವೈರುಧ್ಯಗಳನ್ನು ಬಂಟರ ಮದುವೆ ಕ್ರಮಗಳಲ್ಲಿ ನಾವು ಗಮನಿಸಬಹುದು. ಬಂಟರ ಮದುವೆ ಶಾಸ್ತ್ರವು ಏಕರೂಪದಲ್ಲಿ ಆಗಬೇಕೆನ್ನುವ ಕೂಗು ಇದೆ. ಆದರೆ ಅದು ಕಾರ್ಯರೂಪಕ್ಕೆ ಬರುವುದರಲ್ಲಿ ತಡವಾಗುತ್ತದೆ.
ಇದನ್ನೆಲ್ಲ ಗಮನಿಸಿ ಹಿರಿಯರಾದ ದಂಬೆಕ್ಕಾನ ಸದಾಶಿವ ರೈಯವರು ಈ ಕಿರುಹೊತ್ತಗೆಯನ್ನು ಹೊರ ತರುತ್ತಿದ್ದಾರೆ ಅನ್ನುವ ಅನಿಸಿಕೆ ನನ್ನದು. ಮದುವೆಯ ಕ್ರಮವನ್ನು ಕಾಲಕಾಲಕ್ಕೆ ಬದಲಾಯಿಸಿ ಕೊಳ್ಳಲು ಸಾಧ್ಯವಾಗಬಾರದು. ಏಕೆಂದರೆ ಮದುವೆಗೆ ತನ್ನದೇ ಆದ ಪವಿತ್ರತೆ ಇದೆ. ಆ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಸದಾಶಿವ ರೈಗಳ ಈ ಹೊತ್ತಗೆ ಉಪಯೋಗವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅನೇಕ ಹಿರಿಯರ ಮಾರ್ಗದರ್ಶನವನ್ನು ಪಡೆದು ತಾನೇ ಗುರಿಕ್ಕಾರನಾಗಿ ಅನೇಕ ಮದುವೆಯ ಪುಣ್ಯ ಕಾರ್ಯವನ್ನು ನೆರವೇರಿಸಿ ಧನ್ಯತಾಭಾವದೊಂದಿಗೆ ದಂಬೆಕ್ಕಾನ ಸದಾಶಿವ ರೈಗಳು ಈ ಪುಸ್ತಕವನ್ನು ಬರೆದಿದ್ದಾರೆ. "ವಸ್ತುನಿಷ್ಠ ಟೀಕೆಗೆ ನನ್ನ ಸ್ವಾಗತವಿದೆ" ಅನ್ನುವ ಮಾತನ್ನು ಸದಾಶಿವ ರೈಗಳು ತನ್ನ ಭಾಷಣದಲ್ಲಿ ಹೇಳಿದ್ದನ್ನು ಈ ಹಿಂದೆ ನಾನು ಕೇಳಿದ್ದೇನೆ. ಇದು ಅವರಿಗೆ ಬಂಟ ಸಮಾಜದ ಮೇಲಿರುವ ಅಭಿಮಾನವನ್ನು ತೋರಿಸಿಕೊಡುತ್ತದೆ.
ದಂಬೆಕ್ಕಾನ ಸದಾಶಿವ ರೈಗಳು ಈ ಕಿರುಹೊತ್ತಗೆಯ ಮೂಲಕ "ಬಂಟರ ಮದುವೆಗೆ" ಒಂದು ನಿರ್ದಿಷ್ಟ ದಿಕ್ಕನ್ನು ತೋರಿಸಿ ಕೊಟ್ಟಿದ್ದಾರೆ. ಈ "ಬಂಟರ ಮದುವೆ ಮಾರ್ಗದರ್ಶಿ" ಪುಸ್ತಕ ಅನೇಕರಿಗೆ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ ಅನ್ನುವ ನಂಬಿಕೆಯಿದೆ.
ಶುಭಾಶಯಗಳು.
ಕುಂಬ್ರ ದುರ್ಗಾಪ್ರಸಾದ್ ರೈ
ಕಾರ್ಯಕಾರಿ ಸಮಿತಿ ಸದಸ್ಯ
ಬಂಟರ ಮಾತೃ ಸಂಘ, ಮಂಗಳೂರು, ದ. ಕ.
ವಿಳಾಸ : ನ್ಯಾಯವಾದಿ
'ಕುಂಬ್ರ ಜನನ', ಅಂಚೆ : ಕುಂಬ್ರ, ಒಳಮೊಗ್ರು ಗ್ರಾಮ
ಪುತ್ತೂರು ತಾಲೂಕು, ದ. ಕ.
ಮೊ: 9480164641