ಮುನ್ನುಡಿ
ಡಾ| ಎಂ. ಮೋಹನ ಆಳ್ವ
ಬಂಟ ದಂಬೆಕ್ಕಾನ ಸದಾಶಿವ ರೈಯವರು ನನಗೆ ಅತ್ಯಂತ ಆತ್ಮೀಯರು ಮತ್ತು ಗೌರವಾನ್ವಿತರು. ಬೇರೆ ಬೇರೆ ಸಂದರ್ಭಗಳಲ್ಲಿ ನಾನು ಅವರನ್ನು ಭೇಟಿಯಾಗಿದ್ದೇನೆ. ಅವರ ವ್ಯಕ್ತಿತ್ವ, ನಡೆ-ನುಡಿ-ತಿಳುವಳಿಕೆಗಳಿಗೆ ನಾನು ಮಾರುಹೋಗಿದ್ದೇನೆ. ಸಮುದಾಯದ ಮುಖಂಡರಾಗಿ ಅವರು ನಿಶ್ಚಯ-ಮದುವೆ ಕಾರ್ಯಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಿ ಕೊಟ್ಟದ್ದನ್ನು ನೋಡಿ ನಾನು ಸಂತೋಷಗೊಂಡಿದ್ದೇನೆ. ಸರಳವಾಗಿ, ಆತ್ಮೀಯ ವಾಗಿ ಆದರೆ ಸಂಪ್ರದಾಯಬದ್ಧವಾಗಿ ನಡೆಸಿಕೊಡುವ ಶುಭಕಾರ್ಯ ಗಳಲ್ಲಿ ಹುಡುಕಿದರೂ ಕೊರತೆ ಕಾಣದಷ್ಟು ಪರಿಪೂರ್ಣ ನಿರ್ವಹಣೆ ಅವರದು. ಬಿ.ಕಾಂ., ಬಿ.ಎ., ಸಿ.ಇ.ಐ. ಪದವೀಧರರಾಗಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವೆಲ್ಲವನ್ನೂ ಬಿಟ್ಟು ಮರಳಿ ಊರಿಗೆ ಬಂದು ನೂಜಿ ತರವಾಡಿನ ನೇತೃತ್ವ ವಹಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದು, ಬಂಟ ಸಮುದಾಯದ ಕೌಟುಂಬಿಕ-ಧಾರ್ಮಿಕ ಆಚಾರ- ವಿಚಾರಗಳಲ್ಲಿ ಸಂಪ್ರದಾಯನಿಷ್ಠತೆಯನ್ನು ಚಾಚೂ ತಪ್ಪದೆ ಪಾಲನೆ ಮಾಡಲು ತೊಡಗಿದ್ದು ಮತ್ತು ಇತರರನ್ನು ಅದೇ ರೀತಿ ನಡೆಯಲು ಪ್ರೇರೇಪಿಸಿದ್ದು ನಮ್ಮ ಸಮುದಾಯದ ಬಹುದೊಡ್ಡ ಭಾಗ್ಯವೇ ಆಗಿದೆ.
ಬಂಟರ ಶುಭಶೋಭನಾದಿ ಆಚಾರ-ವಿಚಾರಗಳಲ್ಲಿ ಸಮಾನತೆ ಗಳಿಲ್ಲ. ಹೀಗೆ ಇರಬೇಕೆಂದು ಮಾರ್ಗದರ್ಶನ ಮಾಡುವ ಪ್ರಾತಿನಿಧಿಕ ಕೃತಿಗಳೂ ಇಲ್ಲ. ಸಮಾನತೆ ತರಬೇಕೆಂದು 'ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಾಳ್ವವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ, ಕೆಲವಂ ಸಜ್ಜನ ಸಂಗದಿಂದ ಅರಿಯಲ್' ಎಂಬಂತೆ ದಂಬೆಕ್ಕಾನ ಸದಾಶಿವ ರೈಯವರು ಮಾಹಿತಿಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದುದರಿಂದ 'ಬಂಟ ಮದಿಮೆ' ಎನ್ನುವ ಕೃತಿ ತುಳು ಭಾಷೆಯಲ್ಲಿ ಮೂಡಿಬಂತು. ಅವರ ಇನ್ನೊಂದು ಕೃತಿ ಕನ್ನಡ ಭಾಷೆಯಲ್ಲಿ ಬರೆದ 'ನಾವು ಬಂಟರು'. ಬಂಟ ಸಮುದಾಯದ ಸವಿಸ್ತಾರ ಪರಿಚಯ ಮಾಡಿಕೊಡುತ್ತಾ 'ಬಂಟ ಮದಿಮೆ'ಗೆ ಮುನ್ನುಡಿ ಬರೆದವರು ಖ್ಯಾತ ಕವಿಗಳಾದ ನಾಡೋಜ ಕಯ್ಯಾರ ಕಿಂಞಣ್ಣ ರೈಯವರು. ವಿದ್ವಾಂಸರಾಗಿ, ಕನ್ನಡ-ತುಳು ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು 'ನಾವು ಬಂಟರು' ಕೃತಿಗೆ ಮುನ್ನುಡಿ ಬರೆದ ಶ್ರೇಷ್ಠರು. ಇವರ ಬದುಕಿನ ಕುರಿತು "ದಂಬೆಕ್ಕಾನ ಸದಾಶಿವ ರೈ ಬದುಕಿನ ಹೆಜ್ಜೆಗಳು' ಎಂಬ ಕೃತಿಯನ್ನು ಡಾ. ರಾಜೇಶ್ ಬೆಜ್ಜಂಗಳರವರು ಸಂಪಾದಿಸಿ ಪ್ರಕಟಿಸಿದ್ದಾರೆ.
ಸದಾಶಿವ ರೈಯವರು 'ಬಂಟರ ಮದುವೆ-ಬಂಟ ಗುರಿಕ್ಕಾರನ ಮಾಹಿತಿ' ಎಂಬ ಕೈಬರಹದ ಪ್ರತಿಯೊಂದನ್ನು ನನ್ನ ಕೈಗಿತ್ತು 'ಮುನ್ನುಡಿ'ಯ ನಾಲ್ಕು ಮಾತುಗಳನ್ನು ಬರೆದು ಕೊಡಬೇಕೆಂದು. ಕೇಳಿದಾಗ ನನಗೆ ಆಶ್ಚರ್ಯವೋ ಆಶ್ಚರ್ಯ. ಏಕೆಂದರೆ ಸಾಹಿತಿಯೂ ಅಲ್ಲದ, ವಿದ್ವಾಂಸನೂ ಅಲ್ಲದ ನನ್ನಲ್ಲಿ ಮುನ್ನುಡಿ ಬರೆಸುವುದರ ಔಚಿತ್ಯವು ತೀರಾ ಯೋಚನೆಗೆ ಹಚ್ಚುವಂತೆ ಮಾಡಿತು. ಬೇರೆ ಬೇರೆ ಸಂದರ್ಭಗಳಲ್ಲಿ ದಂಬೆಕ್ಕಾನ ಸದಾಶಿವ ರೈಯವರಂತೆ ಶುಭಸಮಾರಂಭಗಳ ನಿರ್ವಾಹಕ (ಬಂಟ ಗುರಿಕ್ಕಾರ)ನ ಕೆಲಸವನ್ನು ನಾನೂ ಮಾಡಿದ್ದಿದೆ. ನನ್ನ ಈ ನಿರೂಪಕತನವೇ ಈ ಕೃತಿಗೆ ಮುನ್ನುಡಿ ಬರೆಯುವ ಅರ್ಹತೆ ಎಂದು ಭಾವಿಸಿ ನಾಲ್ಕು ಮಾತುಗಳನ್ನು ಬರೆಯಲು ಸಂತೋಷ ವಾಗುತ್ತದೆ.
ಮೂಲತಃ ತುಳುನಾಡೆಂದು ಕರೆಯುವ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳು ಬಂಟ ಸಮುದಾಯದ ಮೂಲ ಜಿಲ್ಲೆಗಳಾಗಿದ್ದು, ಇಂದು ಬಂಟರು ಜಗತ್ತಿನಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಸ್ವಾಭಿಮಾನ, ಧೈರ್ಯ, ಸಾಹಸ ಪ್ರವೃತ್ತಿ ಮತ್ತು ಇತರರಿಂದ ಗೌರವಿಸಲ್ಪಡುವವರಾದ ಬಂಟರ ಇತಿಹಾಸ ಅಲುಪ ಅರಸರ ಕಾಲಕ್ಕೆ ಹೋಗುತ್ತದೆ. ವಿಜಯನಗರ ಅರಸರ ಕಾಲದಲ್ಲಿ ಭಟರಾಗಿದ್ದು 'ಬಂಟ'ರಾದರು ಎಂಬ ಸರ್ವಸಮ್ಮತ ಒಪ್ಪಿಗೆ ಇರುವ ಬಂಟ ಸಮುದಾಯ ಭೂತಾರಾಧನೆಯ ಜೊತೆಗೆ 'ಮೃತಾತ್ಮಗಳ' ಆರಾಧಕರೂ, ನಾಗಾರಾಧಕರೂ ಹೌದು.
ಮಾತೃಮೂಲೀಯ ಸಂಪ್ರದಾಯವೂ ನಮ್ಮದಾಗಿರುವುದರಿಂದ ಇತರ ಜನಾಂಗಗಳಿಗಿಂತ ನಾವು ಭಿನ್ನರು. ಈ ಭಿನ್ನತೆ ಹುಟ್ಟಿನಿಂದ ಸಾವಿನವರೆಗಿನ ಎಲ್ಲಾ ಆಚಾರ-ವಿಚಾರಗಳಲ್ಲಿ ರೂಢಿಯಲ್ಲಿದ್ದು ನಾವು ನಮ್ಮದೇ ಆದ ವಿಶಿಷ್ಟ ಸಂಪ್ರದಾಯಕ್ಕೆ ಒಳಪಟ್ಟವರು.
ಈ ಕುರಿತಾಗಿ ನಾಡೋಜ ಕಯ್ಯಾರ ಕಿಂಞಣ್ಣ ರೈಯವರ 'ಸಂಪರ್ಕ', ಡಾ. ಇಂದಿರಾ ಹೆಗ್ಗಡೆಯವರ 'ಬಂಟರು-ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ' ಮತ್ತು ಬಿ. ಸುರೇಂದ್ರ ರಾವ್ ಅವರ 'Bunts in History and Culture' ಕೃತಿಗಳು ಮಾಹಿತಿಗಳನ್ನೊದಗಿಸುತ್ತವೆ. ಸಂಶೋಧನಾತ್ಮಕ ಹಿನ್ನಲೆಯ ಈ ಕೃತಿಗಳಿಗಿಂತ ಅನುಭವದ ಆಧಾರದ ಮೇಲೆ ರೂಪುಗೊಂಡ ದಂಬೆಕ್ಕಾನರ ಕೃತಿ ಬಹು ಭಿನ್ನವಾದುದು. ಈ ಹಿನ್ನಲೆಯಲ್ಲಿ ಗೌರವಾನ್ವಿತರಾದ ಶ್ರೀ ಮುಲ್ಕಿ ಹರಿಪೂಂಜರು ಬಂಟರ ಆಚಾರ-ವಿಚಾರಗಳ ಬಗ್ಗೆ ವಿಶೇಷ ಒಲವಿದ್ದವರು. ನಿರ್ವಾಹಕರಾಗಿ ಬಂಟ ಸಹಜ ಗತ್ತಿನಲ್ಲಿ, ನಿಷ್ಠುರವಾಗಿ ಆದರೆ ಸಂಪ್ರದಾಯಬದ್ಧವಾಗಿ ಮದುವೆ ಕಾರ್ಯಕ್ರಮಗಳನ್ನು ಅವರು ನಡೆಸಿಕೊಡುವ ರೀತಿಯೇ ಬಲುಸೊಗಸು. ಬಂಟರ ಶುಭಶೋಭನಾದಿ ಕಾರ್ಯಕ್ರಮಗಳ ಕುರಿತು ಅಧಿಕೃತವಾಗಿ ಮೊದಲು ಮಾತನಾಡಿದವರು, ಬರೆದವರು ಸನ್ಮಾನ್ಯ ಶ್ರೀ ಮುಲ್ಕಿ ಹರಿಪೂಂಜರು.
ಹಿಂದಿನ ಕಾಲದಲ್ಲಿ ಬಂಟ ಸಮುದಾಯದ ಮದುವೆಗಳು ಬಹಳ ಹತ್ತಿರದ ಸಂಬಂಧಗಳಲ್ಲಿ ನಡೆಯುತ್ತಿದ್ದುವು. ಇಂದು ದೂರದೂರದ ಊರುಗಳಿಗೆ ಸಂಬಂಧಗಳಾಗುತ್ತಿವೆ. ಹಿಂದೆ ಮದುವೆಗಳು ವರನ ಅಥವಾ ವಧುವಿನ ಮನೆಗಳಲ್ಲಾಗು ತಿದ್ದುವು. ಕ್ರಮೇಣ ಕಲ್ಯಾಣ ಮಂಟಪಗಳ ಬಳಕೆ ಬಂತು.
ಬೇರೆ ಸಮುದಾಯಗಳ ಆಚಾರ-ವಿಚಾರಗಳು ಇದರೊಂದಿಗೆ ಸೇರಿಕೊಂಡವು. ಜಾಗತೀಕರಣದ ಅವಸರ ಇಲ್ಲೂ ಕಾಣಿಸಿ ಕೊಂಡಿತು. ಒಟ್ಟಿನಲ್ಲಿ ಬಂಟರ ವಿಶಿಷ್ಟ ಆಚರಣೆಗಳು ಮಾಯವಾಗಿ ಅಲ್ಲಿ ಆರ್ಯರೇ ಮೊದಲಾದ ಇತರ ಸಮುದಾಯಗಳ ಆಚಾರ-ವಿಚಾರಗಳು ಮತ್ತು ಇಂದಿನ ಅವಸರ-ಧಾವಂತಗಳು ಮೇಲೈಸಿ ಕೊಂಡವು. ಪರಿಣಾಮವಾಗಿ ನಿಶ್ಚಿತಾರ್ಥ, ಮದುವೆ ಮೊದಲಾದ ಪದ್ಧತಿಗಳು ತನ್ನ ಮೂಲ ಸ್ವರೂಪವನ್ನೇ ಮರೆತು ಹೋಮ-ಹವನಗಳಿಗೆ, ಅದ್ದೂರಿಗೆ, ಹಣದ ದುಂದುವೆಚ್ಚಕ್ಕೆ ದಾರಿ ಮಾಡಿ ಕೊಟ್ಟಿತು. ಸಂಪ್ರದಾಯವಾಗಲೀ ಪಾವಿತ್ರ್ಯವಾಗಲೀ ಇಲ್ಲದೆ ನಡೆಯುವ ಈ ಆಚಾರಗಳನ್ನು ಕಂಡು ದುಃಖಗೊಂಡು ಅವುಗಳನ್ನು ಮರುರೂಪಿಸಲು ನಡೆಸುವ ಪ್ರಯತ್ನವೇ ಅಕ್ಷರರೂಪ ಪಡೆದು ದಂಬೆಕ್ಕಾನರ ಲೇಖನಿಯಿಂದ 'ಬಂಟರ ಮದುವೆ-ಬಂಟ ಗುರಿಕ್ಕಾರನ ಮಾಹಿತಿ' ಎಂಬ ಉಪಯುಕ್ತ ಕಿರುಹೊತ್ತಗೆಯಾಗಿ ಮೂಡಿಬಂದಿದೆ.
ಈ ಕೃತಿಯಲ್ಲಿ ಮದುವೆ ಸಂಪ್ರದಾಯ ರೂಪುಗೊಂಡ ವಿವರಗಳಿವೆ. ಸ್ತ್ರೀಪುರುಷರಿಗೆ ವಿವಾಹವೆನ್ನುವುದು ಮರ್ಯಾದೆ, ಗೌರವ ಹಾಗೂ ಧಾರ್ಮಿಕ ವಿಧಿ ಎನ್ನುತ್ತಾ ನಮ್ಮ ಸಂಸ್ಕೃತಿಯಲ್ಲಿ ಸಂಸಾರ ಮತ್ತು ವಂಶಾಭಿವೃದ್ಧಿಯ ಮಹತ್ವಗಳನ್ನು ವಿವರಿಸ ಲಾಗಿದೆ. ಸಂಸಾರದಲ್ಲಿ ಹೆಣ್ಣೂ ಮೇಲಲ್ಲ-ಗಂಡೂ ಮೇಲಲ್ಲ. ಇಲ್ಲಿ ಸ್ಪರ್ಧಾ ಮನೋಭಾವ ಸಲ್ಲದು; ಸಹಕಾರ ಮನೋಭಾವ ಇರಬೇಕು. 'ಕಾಡಲ್ಲೇ ಹುಟ್ಟಿದ ಮಾವಿನಕಾಯಿಗೆ ಸಮುದ್ರದಲ್ಲಿ ಹುಟ್ಟಿದ ಉಪ್ಪಿನ ಜೊತೆಯಾಗುವ ವೈವಿಧ್ಯಮಯ ಬೆಸುಗೆ! ಎಲ್ಲೋ ಹುಟ್ಟಿದ ಮಾಮರವು ಎಲ್ಲೋ ಹುಟ್ಟಿದ ಕೋಗಿಲೆಗೆ ಆಶ್ರಯ ಅನುಮೋದನೆ ನೀಡುವ ಸುಮಧುರ ಬಾಂಧವ್ಯವೇ ವಿವಾಹ' ಎನ್ನುವ ಸಾಂಸಾರಿಕ ಸಾಮರಸ್ಯದ ಸೌರಭವಿದೆ. ಸಾಂಸಾರಿಕ ಸಂಬಂಧವು ಸುಮಧುರವಾಗಿ ಮುಂದುವರಿಯಲು ಅದರ ಪ್ರಾರಂಭವೂ ಸೊಗಸಾಗಿಯೇ ಇರುವುದು ಅಗತ್ಯ. ಅದಕ್ಕಾಗಿ ಮದುವೆ ನಿಶ್ಚಯ-ಮದುವೆ ಕಾರ್ಯಕ್ರಮಗಳೆಲ್ಲವೂ ಸಂಪ್ರದಾಯಬದ್ಧವಾಗಿ ಒಂದೇ ರೀತಿ ನಡೆಯಬೇಕು ಮತ್ತು ಸಾರ್ವತ್ರಿಕವಾಗಿ ಪಾಲನೆಯಾಗಬೇಕು. ಅದಕ್ಕಾಗಿ ಶುಭಸಮಾರಂಭಗಳನ್ನು ನಡೆಸಿಕೊಡುವ ನಿರ್ವಾಹಕರಿಗೆ ಅನುಕೂಲವಾಗಲು ಈ ಕೈಪಿಡಿಯನ್ನು ದಂಬೆಕ್ಕಾನರು ರಚಿಸಿದ್ದಾರೆ. ಈ ಕೈಪಿಡಿಯನ್ನು 'ಬಂಟ ಗುರಿಕ್ಕಾರನ ಮಾರ್ಗಸೂಚಿ' ಎಂದು ಕರೆಯುತ್ತಾ ನಿರ್ವಾಹಕರು ತಿಳಿದಿರಬೇಕಾದ ನಿಶ್ಚಿತಾರ್ಥ-ಮದುವೆಯ 32 ಅಂಶಗಳನ್ನು ಪಟ್ಟಿ ಮಾಡುತ್ತಾರೆ. ನಿಶ್ಚಿತಾರ್ಥ (ಬದ್ದೊ)ದಲ್ಲಿ ಇರಬೇಕಾದ ಸಾಹಿತ್ಯ ಮತ್ತು ನಿಶ್ಚಿತಾರ್ಥ ವಿಧಿ ನಿರ್ವಹಣೆ. ಮದುವೆ ಮಂಟಪಕ್ಕೆ ಬೇಕಾದ ಸಾಹಿತ್ಯ, ಮದುವೆ ಕಾರ್ಯಕ್ರಮ ನಿರ್ವಹಿಸುವುದರ ಮಾಹಿತಿ, ಧಾರಾಕಲಶದ ಮಹತ್ವ, ಒಡ್ಡಿಉಂಗಿಲ ಮಹತ್ವ, ಧಾರೆಯೆರೆಯುವ ಕ್ರಮ, ಕರಿಮಣಿ ಧಾರಣೆಯ ಮಹತ್ವ, ದೇಸೆ, ಮಂಟಪ ಇಳಿಸುವುದು, ವಧು ಬಿಟ್ಟು ಕೊಡುವುದು, ಬೊಂಡ ಕುಡಿಯುವುದು- ಹೀಗೆ ನಿಶ್ಚಿತಾರ್ಥ-ಮದುವೆ ಕಾರ್ಯಗಳಲ್ಲಿ ಆಗಬೇಕಾದ ವಿಧಿ-ವಿಧಾನಗಳನ್ನು ಅವುಗಳ ಮಹತ್ವದೊಂದಿಗೆ ಲೇಖಕರು ನಿರ್ವಾಹಕನಿಗೆ ಅನುಕೂಲ ವಾಗುವಂತೆ ವಿವರಿಸಿದ್ದಾರೆ.
ಒಟ್ಟಿನಲ್ಲಿ ದಂಬೆಕ್ಕಾನ ಸದಾಶಿವ ರೈಯವರು ಬಂಟ ಸಮುದಾಯದ ಮದುವೆ ನಿಶ್ಚಯದಿಂದ ತೊಡಗಿ ಮದುವೆಯ ಮುಕ್ತಾಯದವರೆಗೆ ಬೇಕಾದ ಸಾಹಿತ್ಯ ಮತ್ತು ವಿಧಿ-ವಿಧಾನಗಳ ಸಾದ್ಯಂತ ವಿವರಣೆಯನ್ನು ಈ ಸಣ್ಣ ಕೈಪಿಡಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಕೇವಲ ನಿರ್ವಾಹಕನಿಗೆ ಅಗತ್ಯವಾದ ಮಾಹಿತಿ ಅನಿಸಿದರೂ ಬಂಟ ಸಮುದಾಯದ ಪ್ರತಿಯೊಬ್ಬರೂ ಅರಿತುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ. ಪ್ರತಿಯೊಬ್ಬ ಬಂಟನ ಮನೆಯಲ್ಲಿಯೂ ಈ ಕೈಪಿಡಿಗೆ ಅವಕಾಶ ನೀಡುವುದು ಒಳಿತು. ಈ ಕೈಪಿಡಿಯನ್ನು ಬಂಟ ಸಮುದಾಯ ಒಪ್ಪಿಕೊಂಡು, ಅಪ್ಪಿಕೊಂಡು ನಮ್ಮ ಸಂಸ್ಕೃತಿ-ಅಸ್ಮಿತೆಯನ್ನು ಪುನರ್ ಸ್ಥಾಪಿಸುವುದು, ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಬಂಟರ ನಿಶ್ಚಿತಾರ್ಥ ಮತ್ತು ಮದುವೆಗೆ ಸಂಬಂಧಿಸಿದ ಉತ್ತಮ ಕೈಪಿಡಿಯೊಂದನ್ನು ಬಂಟ ಸಮುದಾಯಕ್ಕೆ ನೀಡಿದ ದಂಬೆಕ್ಕಾನ ಸದಾಶಿವ ರೈಗಳು ಪ್ರಶಂಸಾರ್ಹರು. ಅವರ ಈ ಸಾಧನೆ ಸಾಮಾಜಿಕವಾಗಿ ಗುರುತಿಸಿ ಗೌರವಿಸಲ್ಪಡಲಿ, ಇನ್ನಷ್ಟು ಕೃತಿಗಳು ಅವರ ಲೇಖನಿಯಿಂದ ಮೂಡಿಬರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.
- ಡಾ| ಎಂ. ಮೋಹನ ಆಳ್ವ
ಚೆಯರ್ಮೇನ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ (ರಿ.)
ಮೂಡುಬಿದಿರೆ- 574 227