ಬಂಟ ಮದುವೆ ಕೈಪಿಡಿಯ ಬಗ್ಗೆ
ದಯಾನಂದ ರೈ ಮನವಳಿಕೆಗುತ್ತು
ತುಳು ಮತ್ತು ಕನ್ನಡ ಲೇಖಕರಾದ ನೂಜಿ ತರವಾಡು ಮನೆಯ ದಂಬೆಕ್ಕಾನ ಸದಾಶಿವ ರೈಗಳ ಕೃತಿ "ಬಂಟ ಮದಿಮೆ" (ತುಳು) ಹಾಗೂ "ನಾವು ಬಂಟರು" ಎನ್ನುವ ಶೀರ್ಷಿಕೆಯ ಪುಸ್ತಕಗಳನ್ನು ಈ ಹಿಂದೆ ಓದಿದ ನೆನಪಿದೆ. ಲೇಖಕರು ಬಂಟ ಮದುವೆ-ಬಂಟ ಗುರಿಕ್ಕಾರನ ಗುರ್ಕಾರ್ಮೆದ ಅಪ್ರಕಟಿತ ಕೈಪಿಡಿಯನ್ನು ಓದಿದೆ. ಈ ಕೈಪಿಡಿಯನ್ನು ಲೇಖಕರು ಬಂಟರ ಹಲವಾರು ಹಿರಿಯ ಅನುಭವಿಗಳು ಮತ್ತು ಲೇಖಕರಿಂದ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ ಬಂಟ ಸಮುದಾಯದ ಮದುವೆಯ ಕ್ರಮಗಳನ್ನು ತಮ್ಮ ಕೃತಿಯಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.
ಲೇಖಕರು ತಮ್ಮ ಪ್ರಸ್ತಾವನೆಯಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿರುವ ವಧೂ-ವರರಿಗೆ ವಿವಾಹವು ಮಹೋನ್ನತವಾದ ಅನುಬಂಧಗಳ ಬೆಳವಣಿಗೆಗೆ, ವಿಶ್ವಾಸಾರ್ಹ ವಾದ ಬಂಧನ, ಕುಟುಂಬದ ಐಕ್ಯತೆ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣದ ಕುರಿತಾಗಿ, ತಮ್ಮ ದೂರದೃಷ್ಟಿಗಳ ಆಯಾಮಗಳ ಕುರಿತಾಗಿ ವಿವಾಹದ ನಾಂದಿಯ ಬಗ್ಗೆ ತಮ್ಮ 20
ಅಭಿಪ್ರಾಯ ನೀಡಿರುತ್ತಾರೆ. ಮುಂದುವರಿಸುತ್ತಾ ಕುಟುಂಬದ ಸುಖ-ಕಷ್ಟ, ನೋವು-ನಲಿವು, ದುಃಖ-ದುಮ್ಮಾನ ಹಾಗೂ ಸಮಸ್ಯೆಗಳ ಸರಮಾಲೆಯನ್ನು ಸಮನಾಗಿ ಹಂಚಿಕೊಂಡು ದಾಂಪತ್ಯದ ಒಳಗುಟ್ಟನ್ನು ಹೊರಗೆ ಹೇಳದೆ ದಂಪತಿಗಳೇ ಪರಸ್ಪರ ಪರಿಹರಿಸಿಕೊಳ್ಳಬೇಕೆಂದು ನೂತನ ವಧೂವರರಿಗೆ ಕೌಟುಂಬಿಕ ಮಾರ್ಗದರ್ಶನಗಳನ್ನು ನೀಡಿರುತ್ತಾರೆ.
ಸದರಿ ಅಪ್ರಕಟಿತ ಕಿರುಪುಸ್ತಕ ಬಂಟ ಗುರಿಕ್ಕಾರನ ಗುರ್ಕಾರ್ಮೆದ ಕೈಪಿಡಿಯಲ್ಲಿ ಉತ್ತಮ ಮಾರ್ಗಸೂಚಿಯನ್ನು ನೀಡಿರುವುದು ಬಂಟ ಮದುವೆಯಲ್ಲಿ ನಿರ್ವಾಹಕ ನಿರೂಪಕರಿಗೆ ಮಾರ್ಗಸೂಚಿಯಾಗಿರುತ್ತಾರೆ. ಹಾಗೂ ಬಂಟ ಸಮುದಾಯದ ಮದುವೆ ರೀತಿ ನೀತಿ, ರಿವಾಜುಗಳಿಗೆ ಸಂಬಂಧಿಸಿದಂತೆ ವಸ್ತುಗಳು, ನಿಶ್ಚಿತಾರ್ಥದ ಸಂದರ್ಭದಲ್ಲಿ ವಧೂವರರ ಕುಟುಂಬದ ಹಿರಿಯರು ಪಾಲಿಸಬೇಕಾದ ಮಾಹಿತಿಯನ್ನು ಹಾಗೂ ದೈವದೇವರುಗಳ ಸಾಕ್ಷಿಯಾಗಿ ಬದ್ಧರು ಎನ್ನುವ ವಿಷಯಗಳ ಮಾಹಿತಿ ಅದ್ಭುತ ವಾಗಿದೆ.
ಮದುವೆಯ ದಿನದಂದು ಮದುವೆ ಸಿದ್ಧತೆಗೆ ಮಂಟಪದಲ್ಲಿ ಇರಬೇಕಾದ ಸಾಹಿತ್ಯ ಪರಿಕರ ವಸ್ತುಗಳ ಪಟ್ಟಿಯನ್ನೇ ಲೇಖಕರು ಮಾಡಿಸುತ್ತಾ ವಧೂ-ವರರ ದಿಬ್ಬಣಗಳ ಮನೆಯಿಂದ ಹೊರಡುವ ಮುನ್ನ ಪಾಲಿಸುತ್ತಿದ್ದ ಕ್ರಮಗಳು, ದಿಬ್ಬಣವು ದೇವಸ್ಥಾನ ಅಥವಾ ಸಭಾಭವನಕ್ಕೆ ಬರುವಾಗ ಸ್ವಾಗತಿಸುವ ಕ್ರಮಗಳನ್ನು ನಂತರ ಬಂಟ-ಧಾರಾ ಪದ್ಧತಿಯ ಪೂರ್ಣ ಮಾಹಿತಿಯನ್ನು ಲೇಖಕರು ತಮ್ಮ ಕೃತಿಯಲ್ಲಿ ನೀಡಿರುವುದು ಬಂಟ ಸಂಸ್ಕೃತಿಯನ್ನು ಮುಂದಿನ ದಿನಗಳಲ್ಲಿ ಮರೆಯದೆ ಪಾಲಿಸಿಕೊಂಡು ಹೋಗಲು ಮಾರ್ಗದರ್ಶಿ ಯಾಗಿರುತ್ತದೆ. ಧಾರಾ ಮುಹೂರ್ತದ ನಂತರ ಕೊನೆಯ ಕ್ರಮ ದೊಂಪ ಜಪ್ಪಾವುನಿ ಕುರಿತು ಮತ್ತು ಪೊಣ್ಣು ಒಚ್ಚಿದ್ ಕೊರ್ಪಿನ ಕ್ರಮದ ಮಾಹಿತಿಯನ್ನು ಕೂಡಾ ಲೇಖಕರು ಸುಂದರವಾಗಿ ಕೃತಿಯಲ್ಲಿ ವರ್ಣಿಸಿದ್ದಾರೆ. ಈ ಕೃತಿ ಬಂಟ ಮದುವೆ ನಡೆಸುವ ಗುರಿಕ್ಕಾರರಿಗೆ ಒಂದು ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ಮುಂದಿನ ದಿನಗಳಲ್ಲಿ ಬಂಟ ಸಮುದಾಯದ ಸಂಸ್ಕೃತಿಯಲ್ಲಿ ಮದುವೆ ನಡೆಸುವಂತಹ ಕ್ರಮದ ಪರಂಪರೆಯನ್ನು ಉಳಿಸಿಕೊಂಡು ಹೋಗಲು ಈ ಕೃತಿ ಮುಂದಿನ ಪೀಳಿಗೆಗೆ ನೆನಪಿಸುವಂತಹ ಕೆಲಸದಲ್ಲಿ ಲೇಖಕರ ಪರಿಶ್ರಮ ಸಾರ್ಥಕವಾಗಿರುತ್ತದೆ.
ಅನುಭವಿ ಲೇಖಕರಾದ ದಂಬೆಕ್ಕಾನ ಸದಾಶಿವ ರೈಗಳಿಂದ ಬಂಟರ ಸಂಸ್ಕೃತಿಯಲ್ಲಿ ಬರುವ ಸೀಮಂತ, ನಾಮಕರಣ ಮತ್ತು ಮರಣ ಸಂಸ್ಕಾರ (ಬೊಜ್ಜ)ದ ಕ್ರಮಗಳನ್ನು ಕುರಿತಾಗಿ ಲೇಖನವನ್ನು ಮುಂದಿನ ಜನಾಂಗದ ಮಾರ್ಗದರ್ಶನಕ್ಕಾಗಿ ಆಶಿಸಬಹುದಾಗಿದೆ. ಬಂಟ ಸಂಸ್ಕೃತಿಯು ಭವಿಷ್ಯದಲ್ಲಿ ನಶಿಸಬಾರದು ಎಂಬ ಲೇಖಕರ ಆಶಯ ಬಂಟ ಸಮುದಾಯ ಮೆಚ್ಚಲೇಬೇಕಾಗಿದೆ.
ದಯಾನಂದ ರೈ ಮನವಳಿಕೆಗುತ್ತು
(ಮಾಜಿ ಅಧ್ಯಕ್ಷರು, ಪುತ್ತೂರು ತಾಲೂಕು ಬಂಟರ ಸಂಘ)
(ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು, ಇದರ ಪುತ್ತೂರು ತಾಲೂಕು ಸಮಿತಿ ಸಂಚಾಲಕರು)